- Dec26
ಸಕ್ಕರೆ, ಪವಾರ್ ಹಾಗೂ ಭೂ ತಾಪಮಾನ ಏರಿಕೆ
ಗುರುದೇವ; ವಿಭಾಗ: ಅರ್ಥಶಾಸ್ತ್ರ;ಚಂದ್ರನ ಮೇಲೆ ನೀರಿನ ಅಸ್ತಿತ್ವವನ್ನು ಕಂಡುಹಿಡಿಯುವುದಕ್ಕೂ, ಆಫ್ರಿಕಾದ ಯಾವುದೋ ಒಂದು ಮೂಲೆಯಲ್ಲಿ ಬಾವಿಯ ಜಲ ಬತ್ತಿಹೋಗುವುದಕ್ಕೂ ಸಂಬಂಧವೇನು?
ನಮ್ಮ ದೇಶದ ಸನ್ಮಾನ್ಯ ಕೃಷಿ ಸಚಿವ ಶರದ್ ಪವಾರ್ ಪ್ರಕಾರ, ಆಫ್ರಿಕಾದ ಆ ಮೂಲೆಯ ಬಾವಿಗಳಿಂದ ಕಾಣೆಯಾದ ನೀರೇ ಚಂದ್ರನ ಮೇಲೆ ಪ್ರತ್ಯಕ್ಷವಾಗಿದೆ.ಮೊದಲಿಗೆ ಕೆಲವು ವಾಸ್ತವಾಂಶಗಳು.
ಭಾರತವು ವಿಶ್ವದಲ್ಲಿ ಬ್ರೆಜ಼ಿಲ್ ನ ನಂತರ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶವಾಗಿದೆ.
ಈ ಮೇಲಿನ ಅಂಶವನ್ನು ಪ್ರತ್ಯೇಕವಾಗಿ ಗಮನಿಸಿದಾಗ ನಮಗನಿಸುವುದೇನೆಂದರೆ, ಭಾರತವು ಸಕ್ಕರೆಯನ್ನು ಇತರೆ ದೇಶಗಳಿಗೆ ಹೇರಳವಾಗಿ ರಫ್ತು ಮಾಡಿ ಉತ್ತಮ ಆದಾಯವನ್ನು ಗಳಿಸಬಹುದು ಎಂಬುದು.
ಆದರೆ, ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಸಕ್ಕರೆ ಬಳಸುವ ದೇಶವೂ ಹೌದು!
ಈಗ ಮೇಲಿನ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ರಫ್ತು ನೀತಿಯನ್ನು ರೂಪಿಸುವುದಾದಲ್ಲಿ ಒಂದು ಮುನ್ನೆಚ್ಚರಿಕೆಯನ್ನು ವಹಿಸಲೇಬೇಕಾಗುತ್ತದೆ. ಅದೆಂದರೆ, ಮುಂದಿನ ವರ್ಷದ ಕಬ್ಬಿನ ಬೆಳೆ ಏನಾದರೂ ನಿರೀಕ್ಷೆಗಿಂತ ಕಡಿಮೆ ಬಂದಲ್ಲಿ ಆಗ ದೇಶದೊಳಗಿನ ಬಳಕೆದಾರರಿಗೆ ಬೇಕಾಗುವಷ್ಟು ಸಕ್ಕರೆಯನ್ನು ಗೋದಾಮಿನಲ್ಲಿ ಶೇಕರಿಸಿಟ್ಟು, ಉಳಿದ ಸಕ್ಕರೆಯನ್ನಷ್ಟೇ ರಫ್ತು ಮಾಡುವುದು ಕ್ಷೇಮಕರ ಅಲ್ಲವೇ? ದೇಶದ ಪ್ರಜೆಗಳಿಗೆ ಬೇಕಾಗುವಷ್ಟು ಸಕ್ಕರೆಯನ್ನೂ ಒದಗಿಸಲಾಗದಿದ್ದಲ್ಲಿ, ವಿಶ್ವದ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶಗಳಲ್ಲಿ ಒಂದಾಗಿ ಏನು ಪ್ರಯೋಜನ ಹೇಳಿ?
ಈಗ ಇನ್ನಷ್ಟು ಅದ್ಭುತವಾದ ಅಂಶಗಳನ್ನು ನೋಡೋಣ
ಕೇವಲ ಒಂಭತ್ತು ತಿಂಗಳ ಹಿಂದಷ್ಟೇ ಶರದ್ ಪವಾರ್ “ನಮ್ಮಲ್ಲಿ ಈಗ ಸಕ್ಕರೆಯ ದಾಸ್ತಾನು ಯತ್ಥೇಚವಾಗಿದೆ” ಎಂದು ಹೇಳುತ್ತ ದೇಶದಲ್ಲಿ ಇದ್ದಬದ್ದ ಸಕ್ಕರೆಯನ್ನೆಲ್ಲ ಕಿಲೋವೊಂದಕ್ಕೆ ಕೇವಲ ೧೨ ರೂಪಾಯಿಯಂತೆ ವಿದೇಶಕ್ಕೆ ರಫ್ತು ಮಾಡಿದ್ದರು!
ಇಂದು ದೇಶದಲ್ಲಿ ಸಕ್ಕರೆ ಅಭಾವ ತೀವ್ರವಾಗಿದ್ದು (ಶೇ ೩೦ ರಷ್ಟು ಅಭಾವ!) ಭಾರತವು ಕಿಲೋವೊಂದಕ್ಕೆ ೨೭-೩೦ ರೂಪಾಯಿ ಕೊಟ್ಟು ೭೦ ಲಕ್ಷ ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳುತ್ತಿದೆ!
ಇಂಥಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವೇನು? ನಮ್ಮ ದೇಶದ ಕೃಷಿ ಮಂತ್ರಿಗಳ ಅದ್ಭುತ ದೂರದೃಷ್ಟಿಯಲ್ಲವೇ?
ಇಂದು ದೇಶದಲ್ಲಿ ಸಕ್ಕರೆಯ ಬೆಲೆ ದುಪ್ಪಟ್ಟಾಗಿದೆ. ಕೇವಲ ಒಂದು ವರ್ಷದ ಹಿಂದಷ್ಟೇ ಕಿಲೋವೊಂದಕ್ಕೆ ೧೬ ರೂಪಾಯಿಯಿದ್ದ ಸಕ್ಕರೆಯ ಬೆಲೆ ಇಂದು ಕಿಲೋವೊಂದಕ್ಕೆ ೩೫ ರಿಂದ ೪೦ ರೂಪಾಯಿಯಾಗಿದೆ.
“ಇದಕ್ಕೇನಂತೀರಿ ಮಂತ್ರಿಗಳೇ?” ಎಂದು ಪವಾರರನ್ನು ಕೇಳಿದಾಗ ಬಂದ ಉತ್ತರವೇನು ಗೊತ್ತೇ? “ಇದಕ್ಕೆಲ್ಲ ಭೂತಾಪಮಾನ ಏರಿಕೆಯೇ ಕಾರಣ“.ಏನೆಂದಿರಿ?
“ಭೂ ಉಷ್ಣಾಂಶ ಏರಿಕೆಯಿಂದ ಕಬ್ಬು ಹಾಗೂ ಇತರ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ”, ಎಂದಿದ್ದಾರೆ ಪವಾರ್.ಇದೇನಂತಿದ್ದೀರಿ ಮಂತ್ರಿಗಳೇ? ಕೆಲವೇ ತಿಂಗಳ ಹಿಂದೆ “ನಮ್ಮಲ್ಲಿ ಕೂತುಂಡರೂ ಕರಗದಷ್ಟು ಸಕ್ಕರೆಯು ರಾಶಿಯಿದೆ” ಎಂದೆಲ್ಲ ಒದರಿದ್ದಿರಿ, ಈಗೇನು ಹೀಗೆ ಉಲ್ಟಾ ಹೊಡೀತಿದ್ದೀರಿ? ಭೂತಾಪಮಾನ ಏರಿಕೆಯಿಂದ ನಮ್ಮ ಸಕ್ಕರೆಯ ರಾಶಿ ಆವಿಯಾಗಿ ಹೋಯಿತೆ? ಇಲ್ಲ ಭೂತಾಪಮಾನ ಇಳಿಯುತ್ತಿದೆ ಎಂಬ ಭ್ರಮೆಯಲ್ಲಿದ್ದುಕೊಂಡು ಇದ್ದ ಬದ್ದ ಸಕ್ಕರೆಯನ್ನೆಲ್ಲ ರಫ್ತು ಮಾಡಿಬಿಟ್ಟಿರಾ?
ನಮ್ಮಲ್ಲಿರುವ ವಸ್ತುವನ್ನು ೧೦ ರೂಪಾಯಿಗೆ ಮಾರಿ, ನಂತರ ಅದೇ ವಸ್ತುವನ್ನು ೨೫ ರೂಪಾಯಿ ಕೊಟ್ಟು ಕೊಂಡುಕೊಳ್ಳುವುದು ಹುಚ್ಚುತನದ ಪರಮಾವಧಿಯಲ್ಲವೇ?
ತಮ್ಮ ಸ್ವಂತಕ್ಕಾಗಿ ವ್ಯವಹಾರ ಮಾಡುವಾಗ ಯಾರೂ ಈ ರೀತಿ ಮಾಡುವುದಿಲ್ಲ. ಆದರೆ ಸರಕಾರಗಳು ಖಂಡಿತ ಮಾಡುತ್ತವೆ. ಏಕೆಂದರೆ ದುಪ್ಪಟ್ಟು ದುಡ್ಡು ಕೊಟ್ಟು ಕೊಂಡುಕೊಳ್ಳುವುದು ಜನಸಾಮಾನ್ಯರೇ ಹೊರತು ಮಂತ್ರಿಗಳಲ್ಲವಲ್ಲ.
ಎಲ್ಲಿಯವರೆಗೆ ಪ್ರಜೆಗಳ ಹಿತಕ್ಕಿಂತ ಬಂಡವಾಳಶಾಹಿ ಹಾಗೂ ಉದ್ಯೋಗಪತಿಗಳ ಹಿತವನ್ನೇ ಹೆಚ್ಚೆಂದು ಪರಿಗಣಿಸುವ ರಾಜಕಾರಣಿಗಳಿರುತ್ತಾರೋ ಅಲ್ಲಿಯವರೆಗೆ ಅಗತ್ಯ ವಸ್ತುಗಳ ಬೆಲೆ ಹೀಗೆಯೇ ಗಗನಕ್ಕೇರುತ್ತಲೇ ಇರುತ್ತದೆ. ಸಕ್ಕರೆಯ ನಂತರ ಮುಂದಿನ ಸರದಿ ಭತ್ತದ್ದು. ಕಾರಣವೇನೆಂಬುದು ನಿಮಗೆ ತಿಳಿದೇ ಇದೆ.
ತಮ್ಮ ಅಸಾಮರ್ಥ್ಯಕ್ಕೆ ಭೂತಾಪಮಾನ ಏರಿಕೆಯನ್ನು ದೂಷಿಸುವುದು ಇಂದು ಸರಕಾರಗಳಿಗೆ ಸುಲಭದ ಅಭ್ಯಾಸವಾಗಿಬಿಟ್ಟಿದೆ.
ಈಗ ನಮ್ಮ ದೇಶದಲ್ಲಿನ ಸಕ್ಕರೆಯ ಅಭಾವಕ್ಕೆ ನೈಜ ಕಾರಣವೇನೆಂಬುದನ್ನು ನೋಡೋಣ.
೨೦೦೮-೦೯ ರಲ್ಲಿ ಭಾರತದಲ್ಲಿ ಉತ್ಪಾದನೆಯಾದ ಸಕ್ಕರೆಯ ಪ್ರಮಾಣ ೧೪೫೦ ಲಕ್ಷ ಟನ್. ೨೦೦೬-೦೭ ರಲ್ಲಿ ಈ ಪ್ರಮಾಣ ೨೮೩೦ ಲಕ್ಷ ಟನ್ ಇತ್ತು! ಕಾರಣ?
ಖಂಡಿತವಾಗಿಯೂ ಭೂತಾಪಮಾನ ಏರಿಕೆಯಲ್ಲ. ಬದಲಿಕೆ ಇದಕ್ಕೆ ಕಾರಣ ರೈತರು ಕಬ್ಬು ಬೆಳೆಯುವುದನ್ನು ಬಿಟ್ಟು ತಮ್ಮ ಗಮನವನ್ನು ಇತರ ಬೆಳೆಗಳತ್ತ ಹರಿಸಿದ್ದು.
“ನಮ್ಮ ಬೆಳೆಗಳಿಗೆ ತಕ್ಕ ಬೆಲೆ ಸಿಗುವುದಿಲ್ಲ. ನಮಗೆ ಪ್ರತಿ ಬಾರಿ ಬೆಳೆ ತೆಗೆದಾಗಲೂ ಏಟು ಬೀಳುತ್ತದೆ. ಉತ್ತಮ ಬೆಳೆ ಬೆಲೆಯಲು ಇಷ್ಟೆಲ್ಲ ಶ್ರಮ ಪಟ್ಟರೂ ಕೊನೆಗೆ ಬೆಳೆ ತೆಗೆದ ನಂತರ ನಮ್ಮ ಸರದಿಗಾಗಿ ಸಕ್ಕರೆ ಕಾರ್ಖಾನೆಗಳ ಬಾಗಿಲಲ್ಲಿ ೧೩-೧೪ ತಿಂಗಳು ಕಾಯಬೇಕಾಗುತ್ತದೆ.” ಎನ್ನುತ್ತಾರೆ ಓರ್ವ ಕಬ್ಬು ಬೆಳೆಯುವ ರೈತ.
ಭಾರತವನ್ನು ವಿಶ್ವದಲ್ಲೇ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶಗಳಲ್ಲಿ ಒಂದಾಗಿ ಮಾಡಿದ ನಮ್ಮ ಕಬ್ಬು ಬೆಳೆಯುವ ರೈತನಿಗೆ ತನ್ನ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ. ಆದ್ದರಿಂದ ಕಬ್ಬಿನ ಬೆಳೆಗಾರರು ತಮ್ಮ ಗಮನವನ್ನು ಉತ್ತಮ ಆದಾಯ ತರುವ ಬೇಳೆಕಾಳು ಹಾಗೂ ಎಣ್ಣೇಬೀಜಗಳತ್ತ ಹರಿಸಿದರು. ಹೀಗಾಗಬಹುದೆಂದು ಎರಡು ವರ್ಷಗಳ ಹಿಂದೆಯೇ ಊಹಿಸಲಾಗಿತ್ತು. ಆದರೆ ನಮ್ಮ ಘನ ಸರ್ಕಾರದ ಮೇಧಾವಿಗಳು ಮಾತ್ರ ಇದನ್ನು ಗಮನಿಸುವಲ್ಲಿ ವಿಫಲರಾದರು.
ಆದ್ದರಿಂದ, ಭೂತಾಪಮಾನ ಏರಿಕೆ, ಹಸಿರುಮನೆ ಪರಿಣಾಮ ಎಂದೆಲ್ಲ ಬಾಯಿಗೆ ಬಂದ ಹಾಗೆ ಒದರುವ ಬದಲು ನಮ್ಮ ರಾಜಕಾರಣಿಗಳು ಪ್ರತಿ ವರ್ಷ ಕನಿಷ್ಠಪಕ್ಷ ದೇಶದೊಳಗಿನ ಜನತೆಗೆ ಸಾಕಾಗುವಷ್ಟಾದರೂ ಬೆಳೆ ಬೆಳೆಯಲು ಸಹಾಯಕವಾಗುವ ಒಂದು ವೈಜ್ಞಾನಿಕ ಕೃಷಿ ನೀತಿಯನ್ನು ರೂಪಿಸುವತ್ತ ಗಮನಹರಿಸಬೇಕಾಗಿದೆ.
ಆದರಿಂದು ಹೊಸ ಹೊಸ ಕಾರ್ಖಾನೆಗಳನ್ನು ತೆರೆಯಲು ಒತ್ತುವರಿಯಾಗುತ್ತಿರುವ ಕೃಷಿ ಭೂಮಿಯ ಪ್ರಮಾಣವನ್ನೂ ಹಾಗೂ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗುವತ್ತಲಿನ ನಮ್ಮ ಓಟವನ್ನೂ ಗಮನಿಸಿದರೆ ಮುಂದಿನ ಜನಾಂಗಗಳು ಕಾರ್ಖಾನೆಗಳ ಉತ್ಪತ್ತಿಯನ್ನೇ ತಿಂದು ಬದುಕಲನುವಾಗುವಂತೆ ತಮ್ಮ ಹಲ್ಲುಗಳನ್ನೂ ಜೀರ್ಣಾಂಗಗಳನ್ನು ಹೊಂದಿಸಿಕೊಳ್ಳಬೇಕಾಗಬಹುದು.
ಇದಕ್ಕೆಲ್ಲ ಪರಿಹಾರವೇನು? ಮೊದಲು ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ ನಮಗೆ ಉಣ್ಣಲು ಸಾಕಾಗುವಷ್ಟು ಬೆಳೆ ಬೆಳೆಯುವತ್ತ ಗಮನ ಹರಿಸೋಣ, ಇದರಿಂದ ಮಾಲಿನ್ಯವೂ ಕಡಿಮೆಯಾಗುವುದು. ಸರಕಾರವು ಮಾಲಿನ್ಯರಹಿತ ತಂತ್ರಜ್ಞಾನಗಳ ಅನ್ವೇಷಣೆಗೆ ದೇಶೀ ಕಂಪೆನಿಗಳಿಗೆ ಧನಸಹಾಯ ಮಾಡಲಿ. ಮಾಲಿನ್ಯರಹಿತ ತಂತ್ರಜ್ಞಾನ ತಯಾರಿಸಲು ಪ್ರಕೃತಿಯಲ್ಲಿ ಬೇಕಾದಷ್ಟು ಉಪಾಯಗಳು, ಸುಳುಹುಗಳು ಸಿಗುತ್ತವೆ. ನಾವು ಕಣ್ಣು ಬಿಟ್ಟು ನೋಡಬೇಕಷ್ಟೆ.
ಒಟ್ಟಿನಲ್ಲಿ ಹೇಳಬೇಕೆಂದರೆ,
ಬೆಲೆಯೇರಿಕೆಗೆ ಕಾರಣವಲ್ಲ ಭೂತಾಪಮಾನ
ಬೆಳೆ ಇಳಿಕೆಯಿದು, ಕಾರಣ – ರೈತ ಅಪಮಾನ
Copyright secured by Digiprove © 2009 Gurudev Rao
’



