ಪ್ರಿಯ ಓದುಗ,
ಹೀಗೆ ಯೋಚಿಸಿ. ನೀವು ಮಗುವಾಗಿದ್ದಾಗ ಸರಿಯಾಗಿ ನಿಲ್ಲಲು ಕಲಿಯುವ ಮುನ್ನ, ನಡೆಯಲು ಕಲಿಯುವ ಮುನ್ನ ಅದೆಷ್ಟು ಬಾರಿ ಎಡವಿರುವಿರಿ, ಬಿದ್ದಿರುವಿರಿ? ಸೈಕಲ್ ಕಲಿಯುವಾಗ ಅದೆಷ್ಟು ಬಾರಿ ಬಿದ್ದಿರುವಿರಿ? ನೀವು ಬೀಳಲು ನಿರಾಕರಿಸಿದ್ದರೆ, ಎಡವಲು ನಿರಾಕರಿಸಿದ್ದರೆ ನಿಲ್ಲಲು, ನಡೆಯಲು, ಸೈಕಲ್ ತುಳಿಯಲು ಸಾಧ್ಯವಾಗುತ್ತಿತ್ತೆ? ಯೋಚಿಸಿ ನೋಡಿ.
ಕ್ಷಮಿಸಿ. ಯಶಸ್ಸಿಗೆ ಕಿರುದಾರಿಯಿಲ್ಲ. ಈಜದೇ ಈಜು ಕಲಿಯಲು ಸಾಧ್ಯವಿಲ್ಲ. ತಪ್ಪು ಮಾಡುವುದು ಕಲಿಕೆಯ ಒಂದು ಅವಿಭಾಜ್ಯ ಅಂಗ. ತಪ್ಪು ಮಾಡುವುದೆಂದರೆ ಅಪ್ರಯೋಜಕ ಕಾರ್ಯವಿಧಾನಗಳನ್ನು ಶೋಧಿಸುವುದು. ಒಂದು ಬಾರಿ ತಪ್ಪು ಮಾಡಿದ ಮೇಲೆ ಅದೇ ತಪ್ಪನ್ನು ಮತ್ತೆ ಮಾಡಬಾರದು. ಏಕೆಂದರೆ ಆ ವಿಧಾನ ವ್ಯರ್ಥವೆಂದು ನಾವು ಆಗಲೇ ಕಲಿತಾಗಿದೆ. ಅದನ್ನೇ ಮತ್ತೆ ಮಾಡುವುದೆಂದರೆ ಆ ಕಲಿಕೆ ವ್ಯರ್ಥವಾಗುವುದು. ಕಲಿಯುವುದೇ ಬೇರೆ. ಕಲಿತ ಜ್ಞಾನವನ್ನು ಬಳಸುವುದೇ ಬೇರೆ. ಮೊದಲ ಬಾರಿ ಒಂದು ತಪ್ಪು ಮಾಡುವುದೆಂದರೆ ಪಾಠ ಕಲಿಯುವುದು. ಮಾಡಿದ ತಪ್ಪನ್ನು ಮತ್ತೆ ಮಾಡದಿರುವುದು ಎಂದರೆ ನಾವು ಕಲಿತ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು. ಮಾಡಿದ ತಪ್ಪನ್ನು ಮತ್ತೆ ಮಾಡುವುದೆಂದರೆ ಕಲಿತ ವಿದ್ಯೆಯನ್ನು ವ್ಯರ್ಥಗೊಳಿಸುವುದು.
ಥಾಮಸ್ ಆಳ್ವ ಎಡಿಸನ್ನನು ವಿದ್ಯುದ್ದೀಪವನ್ನು ಯಶಸ್ವಿಯಾಗಿ ಕಂಡುಹಿಡಿಯುವ ಮುನ್ನ ೧೦೦೦೦ ವಿಫಲ ಪ್ರಯೋಗಗಳನ್ನು ಮಾಡಿದ್ದನಂತೆ! ಅಂದರೆ ವಿದ್ಯುದ್ದೀಪ ಸರಿಯಾಗಿ ಕೆಲಸ ಮಾಡದ ೧೦೦೦೦ ಬೇರೆ ಬೇರೆ ವಿಧಾನಗಳನ್ನೂ ಸಹ ಆತ ಕಂಡುಹಿಡಿದಿದ್ದನೆಂಬುದು ಇದರ ಅರ್ಥ ಅಲ್ಲವೇ? ಆದ್ದರಿಂದ ವೈಫಲ್ಯತೆಯನ್ನು ಒಂದು ವೈಫಲ್ಯತೆಯಂತೆ ಕಾಣದೆ ಸಫಲತೆಯೆಡೆಗಿನ ಮೆಟ್ಟಿಲುಗಳಂತೆ ಕಾಣಿರಿ. ಸಫಲತೆಯೆಂಬುದೊಂದು ಕೊನೆಯಲ್ಲ. ಅದೊಂದು ಬಾಳಿನ ಘಟ್ಟ. ನಮ್ಮ ಬಾಳಿನಲ್ಲಿ ಇಂಥಹ ಅನೇಕ ಘಟ್ಟಗಳಿರಬೇಕು. ವಿಫಲತೆಗಳು ಒಂದು ಸಫಲತೆಯಿಂದ ಇನ್ನೊಂದರೆಡೆಗೆ ನಾವು ಏರುವ ದಾರಿಯಲ್ಲಿನ ಮೆಟ್ಟಿಲುಗಳು. ಮಾಡಿದ ತಪ್ಪನ್ನೇ ಮತ್ತೆ ಮಾಡಿದಾಗ ನಾವು ಮೆಟ್ಟಿಲು ಇಳಿಯುತ್ತೇವೆ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡದೆ ಪಾಠ ಕಲಿಯುತ್ತಿದ್ದರೆ ಮೆಟ್ಟಿಲನ್ನು ಏರುತ್ತಾ ಹೋಗುತ್ತೇವೆ. ಜೀವನದಲ್ಲಿ ಗುರಿಯಿಲ್ಲದಿದ್ದರೆ ಇತರರ ಗುರಿಗಳಿಗೆ ಮೆಟ್ಟಿಲುಗಳಾಗುತ್ತೇವೆ.
ಈ ಮೊದಲೇ ಹೇಳಿದಂತೆ ಯಶಸ್ಸಿಗೆ ಕಿರುದಾರಿಯಿಲ್ಲ. ಹಾಗೆ ನೋಡಿದರೆ ಮುಟ್ಟಲು ಯೋಗ್ಯವಾದ ಯಾವುದೇ ಗುರಿಗೆ ಕಿರುದಾರಿಯಿಲ್ಲ. ಇದ್ದರೆ ಬಹಳ ಜನ ಅದಾಗಲೇ ಅದನ್ನು ಮುಟ್ಟಿರುತ್ತಾರೆ. ನಿಮ್ಮದೇನು ದೊಡ್ಡ ಸಾಧನೆ.
ತಪ್ಪಿಗೂ ವೈಫಲ್ಯತೆಗೂ ವ್ಯಥ್ಯಾಸವೇನು? ತಪ್ಪು ಒಂದು ಕಾರಣ ಕ್ರಿಯೆ. ವೈಫಲ್ಯತೆ ಅದರ ಪರಿಣಾಮ. ಅಂತೆಯೇ ಯಶಸ್ಸಿಗೂ ಕಾರಣ ಇದೇ ಕ್ರಿಯೆ. ಆದರೆ ಹೆಚ್ಚಿನ ಮಟ್ಟಿಗೆ ಈ ಹಿಂದಿನ ವೈಫಲ್ಯತೆಗಳು ಹಾಗೂ ಅದರಿಂದ ನೀವು ಕಲಿತ ಪಾಠಗಳು ನಿಮ್ಮ ಯಶಸ್ಸಿನ ಕ್ರಿಯೆಗೆ ಕಾರಣ. ಅದರ ಹೆಸರೇ ಅನುಭವ.
ಸರಿ. ವೈಫಲ್ಯತೆಯನ್ನು ಯಶಸ್ಸಾಗಿ ಬದಲಿಸುವುದು ಹೇಗೆ? ಸರಳ. ನಿಮ್ಮ ತಪ್ಪಿನಿಂದ ಪಾಠ ಕಲಿಯಿರಿ. ನೀವು ಎಲ್ಲಿಯವರೆಗೆ ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಜೀವನದಲ್ಲಿ ”ತಪ್ಪು ಮಾಡುವುದು” ಎಂಬುವುದಿರುವುದಿಲ್ಲ, ಅವೆಲ್ಲ ಕೇವಲ ”ಪಾಠ ಕಲಿಯುವುದು” ಆಗಿರುತ್ತದೆ. ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ. ಜೀವನದಲ್ಲಿ ಬಹಳಷ್ಟು ಬಾರಿ ಎರಡನೆಯ ಅವಕಾಶ ಸಿಗುವುದಿಲ್ಲ. ಮೊದಲ ಬಾರಿ ಯಶಸ್ವಿಯಾಗದಿದ್ದರೆ ಗಗನ ಜಿಗಿತ (Sky Diving) ನಿಮಗಲ್ಲ ಬಿಡಿ
ನಾನು ತಪ್ಪೇ ಮಾಡಿಲ್ಲ ಎಂದು ಯಾರಾದರೂ ಹೇಳಿದರೆ ಅವರು ಜೀವನದಲ್ಲಿ ಏನನ್ನೂ ಮಾಡಿರಲು ಸಾಧ್ಯವಿಲ್ಲ. ಎರಡು ವರ್ಷ ನಾನೇನೂ ತಪ್ಪು ಮಾಡಿಲ್ಲ ಎಂದು ಯಾರಾದರೂ ಹೇಳಿದರೆ, ಅವರು ಎರಡು ವರ್ಷ ವ್ಯರ್ಥ ಮಾಡಿದರೆಂದು ಅರ್ಥ. ಆದರೆ ಹುಷಾರು. ತಪ್ಪು ಮಾಡುವುದೆಂದರೆ ಕಾನೂನು ಬಾಹಿರ ಕೆಲಸಗಳನ್ನು, ಅಪರಾಧಗಳನ್ನು ಮಾಡುವುದಲ್ಲ. ತಪ್ಪು ಮಾಡಿ ಪಾಠ ಕಲಿಯುವುದೆಂದರೆ ಗೊತ್ತಿಲ್ಲದೇ ತಪ್ಪು ಮಾಡುವುದು ಎಂದರ್ಥ. ನಿಮ್ಮ ಒಂದು ಕ್ರಿಯೆ ತಪ್ಪು ಎಂದು ತಿಳಿಯಲು ನೀವೇ ಆ ತಪ್ಪನ್ನು ಮಾಡಿ ಕಲಿಯಬೇಕು ಎಂದು ಅರ್ಥವಲ್ಲ. ಕಳ್ಳತನ ತಪ್ಪು ಅಪರಾಧ ಎಂದು ತಿಳಿಯಲು ಸಾಮಾನ್ಯ ಜ್ಞಾನ ಸಾಕು. ಎಲ್ಲ ತಪ್ಪುಗಳನ್ನು ಜೀವನದಲ್ಲಿ ನಾನೇ ಮಾಡಿ ಅದರಿಂದ ಪಾಠ ಕಲಿಯುತ್ತೇನೆಂದುಕೊಳ್ಳಬೇಡಿ. ಯಾರ ಜೀವನದಲ್ಲೂ ಅಷ್ಟು ಸಮಯವಿಲ್ಲ. ಬೇರೆಯವರ ತಪ್ಪುಗಳಿಂದಲೂ ಪಾಠ ಕಲಿಯಿರಿ. ಪುಸ್ತಕಗಳು, ಅದರಲ್ಲೂ ಜೀವನಚರಿತ್ರೆಗಳು ಇರುವುದು ಅದಕ್ಕಾಗಿಯೇ. ಒಂದು ಒಳ್ಳೆ ಜೀವನಚರಿತ್ರೆಯಲ್ಲಿ ಒಬ್ಬ ವ್ಯಕ್ತಿಯ ಇಡೀ ಜೀವನದ ತಪ್ಪುಗಳು ಹಾಗೂ ಅದರಿಂದ ಕಲಿತ ಪಾಠಗಳಿರುತ್ತವೆ. ಹಿಟ್ಲರನ ಜೀವನ ಚರಿತ್ರೆ “ಮೈನ್ ಕೆಂಫ್”(Mein Kempf) ದಲ್ಲಿ ನಿಮಗೆ ಮಾಡಬಾರದ ತಪ್ಪುಗಳ ಸರಮಾಲೆ ಸಿಗುತ್ತದೆ. ಆ ತಪ್ಪುಗಳಿಂದ ಕೋಟ್ಯಂತರ ಜನ ಶೋಷಣೆಗೊಳಗಾಗುವಂತಾಯಿತು. ಅದೇ ಮಹಾತ್ಮ ಗಾಂಧಿಯವರ ಜೀವನಚರಿತ್ರೆ “ಸತ್ಯದೊಡನೆ ನನ್ನ ಪ್ರಯೋಗಗಳು” (My Experiments with Truth) ದಲ್ಲಿ ನಿಮಗೆ ಯಶಸ್ವೀ ಜೀವನಕ್ಕೆ ದಾರಿ ತೋರುವ ತಪ್ಪುಗಳ ಸರಮಾಲೆ ಸಿಗುತ್ತದೆ. ಗಾಂಧೀಜಿ ತಮ್ಮ ತಪ್ಪುಗಳಿಂದ ಕಲಿತ ಪಾಠಗಳು ಇಂದಿಗೂ ಕೋಟ್ಯಂತರ ಜನರಿಗೆ ದಾರಿದೀಪವಾಗಿದ್ದು ಅವರನ್ನು ಯುಗಪುರುಷನನ್ನಾಗಿಸಿದವು. ಕೊನೆಗೆ ಈ ಎರಡೂ ಜೀವನಚರಿತ್ರೆಗಳು ನಮಗೆ ದಾರಿ ತೋರಿಸುತ್ತವೆ, ಒಂದು ಎಲ್ಲಿಗೆ ಹೋಗಬಾರದೆನ್ನುವ ದಾರಿ, ಇನ್ನೊಂದು ಎಲ್ಲಿಗೆ ಹೋಗಬೇಕೆನ್ನುವ ದಾರಿ.
ಒಬ್ಬ ವ್ಯಕ್ತಿಯ ಕಪಾಳಕ್ಕೆ ಹೊಡೆಯುವುದು ತಪ್ಪೋ ಇಲ್ಲ ಅಪರಾಧವೋ? ಕಾನೂನಿನ ಪ್ರಕಾರ ಅದು ಅಪರಾಧ. ಆದರೆ ಅದು ಅಪರಾಧವೆಂದು ನಿಮಗೆ ತಿಳಿಸಲು ಒಂದು ಕಾನೂನಿನ ಅವಶ್ಯಕತೆಯಿದೆ ಎಂದಾದರೆ ನೀವು ತಪ್ಪು ಮಾಡಲಿಕ್ಕೇ ಅನರ್ಹರು ಎಂದರ್ಥ. ಏಕೆಂದರೆ ನಿಮ್ಮ ತಪ್ಪುಗಳು ನಿಮಗೆ ಆಗ ಬಹಳ ಭಾರಿ ಬೀಳುತ್ತವೆ.
ಕಳೆದ ಎರಡು ದಶಕಗಳ ಜೀವನದಲ್ಲಿ ಪ್ರಪಂಚದ ಬಗೆಗಿನ ತಮ್ಮ ದೃಷ್ಟಿಕೋಣ ಬದಲಾಗಿಯೇ ಇಲ್ಲವೆಂದು ಯಾರಾದರೂ ಹೇಳಿದರೆ, ಒಂದೋ ಅವರು ಸರ್ವಜ್ಞರಾಗಿರಬೇಕು, ಇಲ್ಲ ಅವರು ಕಳೆದ ಎರಡು ದಶಕಗಳಲ್ಲಿ ಏನನ್ನೂ ಕಲಿತೇ ಇಲ್ಲ. ನಾವು ಹೆಚ್ಚು ಹೆಚ್ಚು ತಪ್ಪು ಮಾಡುತ್ತಿದ್ದಂತೆ, ನಮ್ಮ ಅನುಭವಗಳು ಹೆಚ್ಚು ಹೆಚ್ಚು ಪಕ್ವವಾಗುತ್ತಿದ್ದಂತೆ ಪ್ರಪಂಚದ ಬಗೆಗಿನ ನಮ್ಮ ದೃಷ್ಟಿಕೋಣವೂ ಬದಲಾಗುತ್ತಿರುತ್ತದೆ. ಬದಲಾವಣೆ ಎನ್ನುವುದಕ್ಕಿಂತಲೂ ಇದನ್ನು ಹೆಚ್ಚಿದ ಪಕ್ವತೆ ಎನ್ನಬಹುದು. ಕೆಲವರಿಗೆ ಇದು ಒಳ್ಳೆಯ ಬದಲಾವಣೆಯಾಗಿರುತ್ತದೆ. ಕೆಲವರಿಗೆ ಅವರ ಅನುಭವಗಳನ್ನಾದರಿಸಿ ಈ ಬದಲಾವಣೆ ಕೆಡುಕನ್ನೂ ತರಬಹುದು. ಉತ್ತಮ ವಾತಾವರಣ ಒಬ್ಬರನ್ನು ಉತ್ತಮ ಮನುಷ್ಯನನ್ನಾಗಿಸಿದರೆ, ದುಷ್ಟ ವಾತಾವರಣದಲ್ಲಿ ಬಂದ ಬದಲಾವಣೆ ಒಬ್ಬನನ್ನು ಉಗ್ರಗಾಮಿಯನ್ನಾಗಿಸಬಹುದು. ಒಟ್ಟಿನಲ್ಲಿ ಪ್ರತಿಯೊಂದು ಪಕ್ವತೆಯೂ ಒಬ್ಬ ಮನುಷ್ಯನ ಜೀವನದಲ್ಲಿ ಸಂಬಂಧಿಸುವ ಘಟನೆಗಳು ಹಾಗೂ ಅವುಗಳಿಗೆ ಆತನು ತೋರುವ ಪ್ರತಿಕ್ರಿಯೆಗಳ ಮೇಳವಾಗಿರುತ್ತದೆ.
ಆದರೆ ಈ ಬದಲಾವಣೆ ಅಥವಾ ಪಕ್ವತೆಯಿಂದ ನಮ್ಮ ಸಿದ್ಧಾಂತಗಳೂ ಬದಲಾಗಲೇಬೇಕೆಂದೇನಿಲ್ಲ. ನಮ್ಮ ಸಿದ್ಧಾಂತಗಳ ಬಗೆಗಿನ ನಮ್ಮ ಬದ್ಧತೆಯನ್ನು ಹಾಗೆಯೇ ಇರಿಸಿಕೊಂಡು ನಾವು ಇನ್ನೂ ಪಕ್ವವಾಗಬಹುದು. ಉದಾಹರೆಣೆಗೆ, ಈ ಪ್ರಕೃತಿಯನ್ನು ಮಾನವ ನಿರ್ಮಿತ ಪ್ರದೂಷಣೆಯಿಂದ, ಮಾನವನ ಆಕ್ರಮಣದಿಂದ ಉಳಿಸಬೇಕೆಂಬುದು ಒಂದು ಸಿದ್ಧಾಂತ. ಆದರೆ ಹೇಗೆ ಉಳಿಸುವುದು ಎಂಬುದು ಒಂದು ಪಕ್ವತೆ. ನಮ್ಮ ವಿಚಾರಧಾರೆಯನ್ನು ಬದಲಿಸದೇ, ಅದನ್ನು ಹೇಗೆ ಆಚರೆಣೆಗೆ ತರಬೇಕೆನ್ನುವ ವಿಧಾನವನ್ನು ನಮ್ಮ ಅನುಭವ ಹೆಚ್ಚಿದಂತೆ ಅದಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು.
ಆದ್ದರಿಂದ ತಪ್ಪುಗಳೆಂಬುದು ಒಂದು ಮಾಹಿತಿಯಂತ್ರವಿದ್ದಂತೆ. ಪುನರಾಚರಿಸಲು ಯೋಗ್ಯವಲ್ಲದ ನಮ್ಮ ಕ್ರಿಯೆಗಳ ಬಗ್ಗೆ ಈ ಯಂತ್ರ ನಮಗೆ ಮಾಹಿತಿಯನ್ನು ನೀಡುತ್ತದೆ. ಹೇಗೆ ನಡೆಯಬಾರದು, ಹೇಗೆ ಲೆಕ್ಕ ಮಾಡಬಾರದು, ಹೇಗೆ ಈಜಬಾರದು, ಹೇಗೆ ಮಾತನಾಡಬಾರದು, ಇತ್ಯಾದಿ ಮಾಹಿತಿಗಳು. ತಪ್ಪೇ ಮಾಡದೆ ಒಂದು ವಿಷಯದಲ್ಲಿ ಪರಿಣತರಾಗಲು ಸಾಧ್ಯವಿಲ್ಲ. ಅತ್ಯುತ್ತಮ ಪರಿಣತರೆಂದರೆ ಅತಿ ಹೆಚ್ಚು ತಪ್ಪುಗಳನ್ನು ಮಾಡಿದವರೆಂದು ಅರ್ಥ. ತಾವು ಮಾಡಿದ ಅಷ್ಟೂ ತಪ್ಪುಗಳನ್ನು ಮತ್ತೆ ಪುನರಾಚರಿಸದೆ ಅವರು ಪರಿಣತರಾದರು. ಒಬ್ಬ ಗ್ಯಾರಿ ಕ್ಯಾಸ್ಪರೋವ್ ಅಥವಾ ಒಬ್ಬ ವಿಶ್ವನಾಥನ್ ಆನಂದ್ ಚದುರಂಗದಲ್ಲಿನ ಹೆಚ್ಚು ಕಡಿಮ ಎಲ್ಲ ತಪ್ಪು ನಡೆಗಳನ್ನು ಮಾಡಿದ ನಂತರವಷ್ಟೆ ಆ ಆಟದಲ್ಲಿ ವಿಶ್ವಶ್ರೇಷ್ಠ ಪಟ್ಟವನ್ನು ಗಳಿಸಿಕೊಂಡಿದ್ದು.
ನಾವು ಹುಟ್ಟಿದಾಗ ನಮ್ಮ ಮಿದುಳು ಖಾಲಿಯಿರುತ್ತದೆ. ನಾವು ಬೆಳೆಯುತ್ತಾ ಹೋದಂತೆ ತಪ್ಪುಗಳನ್ನು ಮಾಡುತ್ತ, ಅದರಿಂದ ಕಲಿಯುತ್ತ ನಮ್ಮ ಮಿದುಳಿನಲ್ಲಿ ಅನುಭವ ಸಂಗ್ರಹ ಮಾದಲಾರಂಭಿಸುತ್ತೇವೆ. ತಪ್ಪುಗಳು ಕೇವಲ ಒಬ್ಬ ವ್ಯಕ್ತಿಗಷ್ಟೇ ಸೀಮಿತವಲ್ಲ. ಒಂದು ಕುಟುಂಬ, ಒಂದು ಸಮಾಜ, ಒಂದು ದೇಶ – ಇವಲ್ಲವೂ ತಪ್ಪು ಮಾಡುತ್ತವೆ. ನಾವು ಬೆಳಿಗ್ಗೆ ಎದ್ದು ಹಲ್ಲುಜ್ಜಲು, ಸ್ನಾನ ಮಾಡಲು, ರಸ್ತೆಯಲ್ಲಿ ನಿಯಮಗಳನ್ನು ಪಾಲಿಸಲು, ದೇಶಕ್ಕೆ ಒಂದು ಸೇನೆಯಿರಲು, ನಮ್ಮ ಗಣಕಗಳಿಗೆ ಗೂಢಪದ(password) ಗಳಿರಲು, ದೇಶದಲ್ಲಿ ಪ್ರಜಾಪ್ರಭುತ್ವವಿರಲು, ಷೇರುಪೇಟೆ ಕುಸಿಯಲು, ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬರಲು – ಈ ಪ್ರತಿಯೊಂದರ ಹಿಂದೆಯೂ ಒಂದು ಜನಾಂಗ, ಒಂದು ಪೀಳಿಗೆ, ಒಂದು ದೇಶ, ಒಂದು ಸಮಾಜ ಮಾಡಿದ ತಪ್ಪುಗಳ ಚರಿತ್ರೆ ಹಾಗೂ ಅವುಗಳಿಂದ ಕಲಿತೆ ಪಾಠಗಳ ಪರಿಣಾಮವಿದೆ. ಆದ್ದರಿಂದ ನಾವು ಚರಿತ್ರೆಯನ್ನು ಕೇವಲ ಒಂದು ಭೂತಕಾಲದಂತೆ ಕಾಣದೆ, ಪೂರ್ವದಿಂದ ಕಲಿತ ಪಾಠಗಳಂತೆ ಕಾಣಬೇಕು. ಇದು ಕೇವಲ ಮಾನವ ಚರಿತ್ರೆಗಷ್ಟೇ ಅಲ್ಲದೆ, ಒಬ್ಬ ವ್ಯಕ್ತಿಯ ಚರಿತ್ರೆಗೂ ಅನ್ವಯಿಸುತ್ತದೆ.
ನಮ್ಮ ಯಶಸ್ಸು ನಮ್ಮ ಶಕ್ತಿಯನ್ನು ತೋರಿಸಿದರೆ, ನಮ್ಮ ವೈಫಲ್ಯತೆ ನಮ್ಮ ಬಲಹೀನತೆಯನ್ನು ತೋರಿಸುತ್ತದೆ. ನಾವು ಜೀವನದಲ್ಲಿ ಯಶಸ್ವಿಯಾಗಲು ನಮ್ಮ ಶಕ್ತಿಯನ್ನು ಅರಿಯುವುದಕ್ಕಿಂತಲೂ ನಮ್ಮ ಬಲಹೀನತೆಯನ್ನು ಅರಿತಿರುವುದು ಮುಖ್ಯ.
ವಿಶ್ವವಿಖ್ಯಾತ ದತ್ತಕೋಶ(Database) ಗಳ ತಯಾರಕ ಸಂಸ್ಥೆ ಒರೇಕಲ್ (Oracle)ನ ಸ್ಥಾಪಕ ಲ್ಯಾರಿ ಎಲ್ಲಿಸನ್ (Larry Ellison)ಗೆ ತನಗೆ ಒಂದು ಸಂಸ್ಥೆಯ ಭಾರೀ ಮಾರಾಟ ವಿಭಾಗ ಹಾಗೂ ಸೇವಾ ವಿಭಾಗವನ್ನು ನಡೆಸಲು ಬೇಕಾಗುವ ಆಡಳಿತಾನುಭವ ಇಲ್ಲವೆಂಬುದರ ಅರಿವಾದಾಗ ಆತ ತಕ್ಷಣ ಮಾಡಿದ ಕೆಲಸ ಆ ಜಾಗಕ್ಕೆ ಒಬ್ಬ ಅನುಭವೀ ಮುಖ್ಯ ಆಢಳಿತಾಧಿಕಾರಿಯನ್ನು ನೇಮಿಸಿದ್ದುದು. ೧೯೯೧ರಲ್ಲಿ ಸಂಸ್ಥೆಗೆ ೧೨ ಕೋಟಿ ಡಾಲರ್ ನಷ್ಟವಾದಾಗ ಆತ ತಕ್ಷಣ ಈ ನಿರ್ಣಯವನ್ನು ತೆಗೆದುಕೊಂಡು ರೇ ಲೇನ್(Ray Lane)ನ್ನು ಆ ಪದವಿಗೆ ನೇಮಿಸಿದನು. ಅಲ್ಲದೆ ಇಡೀ ಸಂಸ್ಥೆಯ ಮಾರಾಟ ಹಾಗೂ ಸೇವಾ ವಿಭಾಗಗಳ ಸಂಪೂರ್ಣ ಆಡಳಿತ ಜವಾಬ್ದಾರಿಯನ್ನು ಅತನಿಗೊಪ್ಪಿಸಿದನು. ಎಲ್ಲಿಸನ್ ತಾನು ಯಾವುದರಲ್ಲಿ ಪರಿಣತನೋ (ಸಂಸ್ಥೆಯ ತಾಂತ್ರಿಕ ವಿಭಾಗ), ಕೇವಲ ಅದಕ್ಕೆ ಮಾತ್ರ ತನ್ನ ಕಾರ್ಯವ್ಯಾಪ್ತಿಯನ್ನು ಸೀಮಿತಗೊಳಿಸಿದನು. ಅಂದಿನಿಂದ ಆ ಸಂಸ್ಥೆ ಹಿಂದಿರುಗಿ ನೋಡಿದ್ದೇ ಇಲ್ಲ.
ವಿಶ್ವವಿಖ್ಯಾತ ಸಂಗೀತ ಸಾಧನ I-Pod ಹಾಗೂ ಸುಂದರ Macintosh ಗಣಗಯಂತ್ರಗಳ ತಯಾರಕ, Apple ಸಂಸ್ಥೆಯ ಸ್ಥಾಪಕ ಸ್ಟೀವ್ ಜಾಬ್ಸ್ (Steve Jobbs)ಗೆ ತನ್ನ ಸಂಸ್ಥೆಯ ಯಶಸ್ಸಿಗೆ ಅದರ ಪ್ರಮುಖ ಎದುರಾಳಿ ಮೈಕ್ರೋಸಾಫ್ಟ್ ಸಂಸ್ಥೆಯ ಸಹಕಾರ ಅಗತ್ಯ ಎಂದು ಅರಿವಾದದ್ದೇ ತಡ, “Appleನ ಯಶಸ್ಸಿಗೆ Microsoft ವಿಫಲವಾಗಬೇಕೆಂಬ ಮನೋಭಾವನೆಯನ್ನು ನಾವು ತೊರೆಯಬೇಕು” ಎಂದು ತನ್ನ ಸಹೋದ್ಯೋಗಿಗಳಿಗೆ ಹೇಳಿ, Appleನಲ್ಲಿ ಪಾಲುದಾರರಾಗಲು Microsoftನ ಬಿಲ್ ಗೇಟ್ಸ್ ಗೆ ಆಹ್ವಾನವಿತ್ತನು. ಮೈಕ್ರೋಸಾಫ್ಟ್ ನ ಹೂಡಿಕೆಯಿಂದ ಸಂಸ್ಥೆಗೆ ೧೫೦ ಕೋಟಿ ಬಂಡವಾಳ ಸಿಕ್ಕಿತು. ಎಲ್ಲರಿಂದಲೂ ಹೀಗೆ ಮಾಡಲು ಸಾಧ್ಯವಿಲ್ಲ. ನಮ್ಮ ಹುಸಿ ಅಹಂನ್ನು ಬಿಟ್ಟುಕೊಡುವುದು ಯಶಸ್ಸಿನ ಮೊದಲ ರಹಸ್ಯ.
ವಿಶ್ವವಿಖ್ಯಾತ SAP ಸಂಸ್ಥೆಗೆ ಉದ್ಯಮಿಕ ವಿಷಯ ನಿರ್ವಹಣಾ (Enterprise Content Management) ವ್ಯವಸ್ಥೆಯಲ್ಲಿ Oracle ಸಂಸ್ಥೆ ತೀವ್ರ ಪ್ರತಿಸ್ಪರ್ಧಿ. ಆದರೆ ತಮ್ಮ ಉದ್ಯಮಿಕ ವಿಷಯ ನಿರ್ವಹಣಾ ತಂತ್ರಾಂಶದಲ್ಲಿ SAP ಬಳಸುವುದು ಅದೇ Oracle ಸಂಸ್ಥೆಯ ದತ್ತಕೋಶವನ್ನು! ಏಕೆಂದರೆ SAP ಸಂಸ್ಥೆಗೆ ತನ್ನ ಬಲಹೀನತೆ ಹಾಗೂ ಶಕ್ತಿಗಳೆರಡರ ಪರಿಚಯವೂ ಇದೆ. ತನಗೆ ಯಾವುದರಲ್ಲಿ ಪರಿಣತಿ ಇದೆಯೋ ಆ ಕ್ಷೇತ್ರದಲ್ಲಿ ಮಾತ್ರ SAP ಕಾರ್ಯವೆಸಗುತ್ತದೆ. ತನಗೆ ಪರಿಣತಿಯಿಲ್ಲದ ಕ್ಷೇತ್ರದಲ್ಲಿ ಕೈಹಾಕಿ ಅದು ವೃಥಾ ಕೈ ಸುಟ್ಟುಕೊಳ್ಳುವುದಿಲ್ಲ.
ನಮ್ಮ ವೈಫಲ್ಯಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸೋಲು ಗೆಲುವು ಮುಖ್ಯವಲ್ಲ. ಆದರೆ ನಮ್ಮ ಪ್ರಯತ್ನಗಳ ಗುಣಮಟ್ಟದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕು. ಒಂದು ಜೇಡದ ಪ್ರಯತ್ನಗಳನ್ನು ನೋಡಿರಿ. ನಾವು ಎಷ್ಟೇ ಬಾರಿ ಅದರ ಬಲೆಯನ್ನು ನಾಶ ಮಾಡಿದರೂ ಅದು ಕೋಪಿಸಿಕೊಳ್ಳದೆ, ಅಳದೆ, ಧೃತಿಗೆಡದೆ ಮತ್ತೆ ಮತ್ತೆ ತನ್ನ ಬಲೆಯನ್ನು ನೇಯಲಾರಂಭಿಸುತ್ತದೆ ಹಾಗೂ ಪ್ರತಿಬಾರಿಯೂ ಅದೇ ಉತ್ತಮ ಗುಣಮಟ್ಟದ ಬಲೆಯನ್ನು ನೇಯುತ್ತದೆ. ಇದು ನಮ್ಮ ಜೀವನದ ಅತಿ ದೊಡ್ಡ ಪಾಠವಾಗಿರಬೇಕು. ಮರಳಿ ಮರಳಿ ಯತ್ನಿಸು.
ಜೀವನದಲ್ಲಿ ಮೇಲಕ್ಕೇರುವುದು ಕಷ್ಟಕರವಲ್ಲ. ಒಮ್ಮೆ ಏರಿದ ಮೇಲ್ಮೈಯನ್ನು ಕಾಪಾಡಿಕೊಳ್ಳುವುದು ಕಷ್ಟಕರ. ಹಾಗೆ ಯಶಸ್ಸಿನ ತುತ್ತತುದಿಯಲ್ಲಿರಲು ಮುಖ್ಯವಾಗಿ ಬೇಕಾದದ್ದು ನಮ್ಮ ಬಲ ಹಾಗೂ ಬಲಹೀನತೆಗೆಳ ಸ್ಪಷ್ಟ ಅರಿವು, ಹಾಗೂ ಬಲಹೀನತೆಗಳನ್ನು ನಿವಾರಿಸಿಕೊಳ್ಳುವತ್ತ ಸಾಗುವ ನಮ್ಮ ಪ್ರಯತ್ನಗಳ ಗುಣಮಟ್ಟ. ನಮ್ಮ ಹುಸಿ ಅಹಂನ್ನು ಬಿಟ್ಟುಕೊಡುವುದು ಹಾಗೂ ಲೆಕ್ಕಾಚಾರದ ನಡೆಯನ್ನಿಡುವುದು.
ಮತ್ತೆ ಇನ್ನೊಮ್ಮೆ ಸ್ಪಷ್ಟಪಡಿಸುತ್ತೇನೆ. ತಪ್ಪು ಎಂದು ತಿಳಿದೂ ತಿಳಿದೂ ಮಾಡುವ ತಪ್ಪು, ಮೊದಲ ಬಾರಿಯಾದರೂ ಸರಿ, ಅದು ಅಪರಾಧವೇ. ಯಾವುದೇ ತಪ್ಪಿಗೆ ನಾವು ಬೆಲೆ ತೆರುವಂತೆ, ಅಪರಾಧಕ್ಕೂ ಬೆಲೆ ತೆರಲೇಬೇಕು. ಅದು ಕಾನೂನು ರೀತ್ಯ ಅಪರಾಧವಲ್ಲದಿದ್ದರೂ, ನಿಮಗೆ ಅದು ಅಪರಾಧವೆಂದು ತಿಳಿದಿದ್ದರೆ ಅದು ಅಪರಾಧವೇ ಸರಿ, ಹಾಗೂ ಆಗ ಅದು ನಿಮ್ಮ ಬಲಹೀನತೆಯೂ ಹೌದು. ನೀವು ಬೇರೆ ಯಾರಿಗೂ ಜೀವನದಲ್ಲಿ ಉತ್ತರಿಸಬೇಕಾಗಿಲ್ಲ. ನಿಮಗೆ ನೀವು ಉತ್ತರಿಸಿಕೊಂಡರೆ ಸಾಕು.
ಎಲ್ಲ ತಪ್ಪುಗಳೂ ಮಾಡಲಿಕ್ಕಾಗಿ ಕಾಯುತ್ತಿವೆ. ಶುಭವಾಗಲಿ.
[ಆಂಗ್ಲ ಅವತರಣಿಕೆ - Make no Mistakes about your Mistakes]
No Comments Yet - be the First!