ಅಮೇರಿಕಾದಲ್ಲಿ ರಾಷ್ಟ್ರಾಧ್ಯಕ್ಷ ಚುನಾವಣೆಗಳು ಸಮೀಪಿಸುತ್ತಿವೆ

ದೇಶದ ಎರಡೂ ಪ್ರಮುಖ ರಾಜಕೀಯ ಪಕ್ಷಗಳಾದ ಡೆಮೊಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷಗಳು ಚುನಾವಣೆ ಗೆಲ್ಲಲ್ಲು ಹಣಾಹಣಿ ನಡೆಸುತ್ತಿವೆ. ಭಯೋತ್ಪಾದನೆ ಚುನಾವಣೆಯ ಪ್ರಮುಖ ವಿಷಯವಾಗಿದೆ. ಈ ಬಗ್ಗೆ ದೇಶದ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಏನೆನ್ನುತ್ತಾರೋ ನೋಡೋಣ!

ಡೆಮೊಕ್ರಾಟ್ ಅಭಿಪ್ರಾಯ – ಭಯೋತ್ಪಾದನೆ ಮತ್ತು ಒಂದು ದೇಶ

ಡೆಮೊಕ್ರಾಟ್ ಅಭ್ಯರ್ಥಿ ಬಾರಾಕ್ ಒಬಾಮಾ ಪ್ರಕಾರ, ಆತನೇನಾದರೂ ಅಮೇರಿಕಾದ ರಾಷ್ಟ್ರಾಧ್ಯಕ್ಷನಾದರೆ, ಅವರು ಮಾಡುವ ಮೊದಲ ಕೆಲಸ, “ಇರಾಕ್ ನಿಂದ ಆಮೇರಿಕನ್ ಸೇನೆಯನ್ನು ವಾಪಸು ಪಡೆದು ಅದನ್ನು ಪಾಕಿಸ್ತಾನಕ್ಕೆ ಕಳುಹಿಸುವುದು! ಬಾರಾಕ್ ಒಬಾಮಾ ಪ್ರಕಾರ, ಇರಾಕಿಗೆ ಅಮೇರಿಕನ್ ಸೇನೆ ಕಳಿಸಿದ್ದು ಒಂದು ದೊಡ್ಡ ತಪ್ಪು, ಪ್ರಪಂಚದ ಭಯೋತ್ಪಾದಕರೆಲ್ಲರೂ ಪಾಕಿಸ್ತಾನದಲ್ಲಿರುವುದರಿಂದ ಭಯೋತ್ಪಾದನೆಯನ್ನು ಮಟ್ಟ ಹಾಕಲು ಅಲ್ಲಿಗೆ ಸೇನೆ ರವಾನಿಸುವುದು ಅತ್ಯಾವಶ್ಯಕ”!

ರಿಪಬ್ಲಿಕನ್ ಅಭಿಪ್ರಾಯ – ಭಯೋತ್ಪಾದನೆ ಮತ್ತು ಒಂದು ಧರ್ಮ

ರಿಪಬ್ಲಿಕನ್ ಅಭ್ಯರ್ಥಿ ಟಾಮ್ ಟಾಂಕ್ರೆಡೋ ಏನು ಹೇಳುತ್ತಾರೆ ನೋಡಿ! ಅವರೇನಾದರೂ ಅಮೇರಿಕಾದ ರಾಷ್ಟ್ರಾಧ್ಯಕ್ಷರಾದರೆ, ಎಲ್ಲ ಭಯೋತ್ಪಾದಕರಿಗೂ ನೀಡುವ ಎಚ್ಚರಿಕೆ ಏನೆಂದರೆ, “ಇನ್ನು ಮುಂದೆ ಏನಾದರೂ ಅಮೇರಿಕಾದ ನೆಲದ ಮೇಲೆ ಭಯೋತ್ಪಾದಕ ದಾಳಿ ನಡೆದುದ್ದೇ ಆದರೆ, ಮುಸಲ್ಮಾನರ ಪವಿತ್ರ ಯಾತ್ರಾ ಸ್ಥಳಗಳಾದ ಮೆಕ್ಕಾ ಹಾಗೂ ಮದೀನಾವನ್ನು ಅಮೇರಿಕಾ ನೆಲಸಮ ಮಾಡುತ್ತದೆ”!

ಭಯೋತ್ಪಾದನೆಯ ಮೇಲಿನ ಸಮರ

ನನಗೆ ತಿಳಿದಿರುವಂತೆ, ಭಯೋತ್ಪಾದನೆಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿದ್ದು ಒಂದು ರಾಷ್ಟ್ರ, ಅದರ ಹೆಸರು ಪಾಕಿಸ್ತಾನ. ಭಯೋತ್ಪಾದನೆಯ ಮೂಲವಿರುವುದು ಪಾಕಿಸ್ತಾನದಲ್ಲಿ, ಮೆಕ್ಕಾ ಅಥವಾ ಮದೀನದಲ್ಲಲ್ಲ.. ಆದ್ದರಿಂದ ಒಬಾಮಾ ಹೇಳಿದ್ದು ಸರಿ ಎನಿಸುತ್ತದೆ.

ಟಾಂಕ್ರೆಡೊ ಈ ಸಮೀಕರಣದಲ್ಲಿ ಅನವಶ್ಯಕ ಪಾಲುದಾರರನ್ನು ಎಳೆದು ತರುವ ಮೂಲಕ, ವಿಷಯವನ್ನು ಇನ್ನಷ್ಟು ಜಟಿಲಗೊಳಿಸುತ್ತಿದ್ದಾರೆ ಎನಿಸುತ್ತದೆ. ನೀವೇನಂತೀರಿ?